Saturday 9 September 2017

ಅಂಗಳದ ಕಥೆ ಅದೇ ಹೇಳಿತು...

ಬೆಳಗಿನ ಜಾವದ ಇಬ್ಬನಿಯ ಚಳಿಯಲ್ಲಿ ಭಾಸ್ಕರನ ಎಳೆಯ ಕಿರಣಗಳು ಬೆಚ್ಚಗೆನಿಸುತ್ತದೆ. ಆಗಾಗ ಪಕ್ಷಿಗಳ ಚಿಲಿಪಿಲಿ ಬೆಳಾಗಾಗಿರುವುದನ್ನು ಸಾರುತ್ತಿರುತ್ತದೆ. ಮನೆಯ ಒಡತಿ ಶಾಂತಮ್ಮ ಹಾಡುತ್ತಿದ್ದುದ್ದು ಸುಪ್ರಭಾತವ ಕೇಳುತ್ತಿರುವಂತೆ ಅನ್ನಿಸುತ್ತದೆ. ಬೆಳಗಾಗಿದ್ದರೂ ಇನ್ನು ಮಲಗುವ ಆಸೆ. ಚಂದಿರನ ತೋಳ ತೆಕ್ಕೆಯಲ್ಲಿಯೇ ಇರುವ ಆಸೆ. 
ನೀರಿನ ಹನಿಗಳು ಬಿದ್ದಂತೆಯೇ ನನ್ನ ಕನಸಿನ ಲೋಕದ ಬಾಗಿಲುಗಳು ಮುಚ್ಚಿ ವಾಸ್ತವಿಕತೆಯ ಬಾಗಿಲುಗಳು ತೆರೆದುಕೊಳುತ್ತವೆ. ಬೇಸಿಗೆಯಂತಿಲ್ಲ ಚಳಿಯಂತಿಲ್ಲ, ಪ್ರತೀದಿನ ತಣ್ಣೀರು ಸ್ನಾನವೇ ಗತಿ. ಕಣ್ಣು ಬಿಡುತ್ತಿದ್ದಂತೆಯೇ ಸೂರ್ಯನ ನಗು ಮುಖ. ಆ ಪ್ರಕಾಶ, ಸಕಾರಾತ್ಮಕತೆ ಉತ್ಸಾಹ ಮೂಡಿಸಿತ್ತದೆ. ಹಸಿರು ಸೀರೆ, ಅದರ ಮೇಲೆ ಬಣ್ಣಬಣ್ಣದ ಹೂವುಗಳು. ಅದನ್ನುಟ್ಟು, ರಂಗೋಲಿಯ ಬೊಟ್ಟನಿಟ್ಟು ದಿನವನ್ನು ಆಲಂಗಿಸುತ್ತೇನೆ. ತುಳಸಿಯು ನೆಲೆಸಿ ನನ್ನ ಗೌರವ ಹೆಚ್ಚಿಸಿದ್ದಾಳೆ. ಪ್ರತಿನಿತ್ಯ ಅವಳ ಪೂಜೆ, ಸಂಜೆಯ ದೀಪ, ಇವೆಲ್ಲ ಮನಸ್ಸಿಗೆ ಬಹಳ ಹತ್ತಿರವಾದಂತಹದ್ದು.
ನನಗೆ ನೆಂಟರಿಷ್ಟರು ಸ್ನೇಹಿತರು ಎಂದೆಲ್ಲಾ ಜಾಸ್ತಿ. ಜಾಜಿಯ ರಸ ಹೀರಲು ಜೀರುಂಡೆ ಬಂದ್ರೆ, ತುಂಬೆ ರಸ ಹೀರಕ್ಕೆ ಚಿಟ್ಟೆಗಳು. ಎಷ್ಟು ವಿಧ ಅಂತೀರ. ನನ್ನ ಮೇಲೆ ಕಾಳುಗಳ ಅಭಿಷೇಕ ಆಗುತ್ತಿದ್ದಂತೆಯೇ ಗುಬ್ಬಚ್ಚಿಯ ಚಿಲಿಪಿಲಿ ಕಿವಿಗೆ ಬೀಳುತಿತ್ತು. ವಿಶೇಷ ಅತಿಥಿಗಳು ಎಂದು ಇಲಿಗಳ ಹಿಂದೆ ಬರುವ ನಾಗಪ್ಪ, ವಲಸೆ ಹೋಗುವ ಪಕ್ಷಿಗಳು... ಹೀಗೆ.
ಹಬ್ಬ ಹರಿದಿನಗಳಲ್ಲಿ ಮದುವಣಗಿತ್ತಿಯಂತೆ ಸಿಂಗಾರ ನಂಗೆ. ಗೋಮಯ ಸಾರಿಸಿ, ಲಕ್ಷಣವಾಗಿ ರಂಗೋಲಿ ಹಾಕಿ ಬಣ್ಣ ತುಂಬಿ, ಹೂವಿನ ಅಲಂಕಾರದಿಂದ ಸಿಂಗರಿಸುತ್ತಾರೆ. ಆಚೆ ಈಚೆ ನಿಂತ ಬಾಳೆಗಂಬ ನನಗೆ ಶೋಭಾಯಮಾನ. ಅವರು ಇವರು ಎಂದು ಹತ್ತಿರದ ನೆಂಟರು, ದೂರದ ಸಂಬಂಧಿಕರು ಬರ್ತಾರೆ. ದಿನವಿಡೀ ಮಕ್ಕಳ ಒಂದು ಗುಂಪು ಆಟವಾಡ್ತಿದ್ರೆ, ಒಂದು ಮೂಲೆಯಲ್ಲಿ ಅಜ್ಜರ ಗುಂಪೊಂದು ಹರಟೆ ಹೊಡೆಯುತ್ತಾ ಮಾತಲ್ಲೇ ಪ್ರಪಂಚವನೆಲ್ಲ ಸುತ್ಕೊಂಡು ಬಂದಿರುತ್ತಾರೆ. 
ಹೀಗೆ ದಿನ ಕಳೆಯುವುದೇ ಗೊತ್ತಾಗುವುದಿಲ್ಲ. ಮುಸ್ಸಂಜೆ ಆವರಿಸಿದಂತೆ ನನ್ನ ದಿನದ ಕೆಲಸಗಳಿಗೆ ಬೆಳಕ ನೀಡುವ ಸೂರ್ಯನು ವಿದಾಯ ಹೇಳುತ್ತಾ ಕೆಂಪಡರಿ ಮುಳುಗುತ್ತಾನೆ. ಇನ್ನೇನೆಂದರು ತಮ್ಮ ತಮ್ಮ ಮನೆಗೆ ಹೊರಡುವ ಸ್ನೇಹಿತರಿಗೆ ಮತ್ತೆ ಬನ್ನಿ ಎಂದು ಹೇಳಿಕಳಿಸಿ ಕತ್ತಲನ್ನು ಹೊಕ್ಕುವುದು.  ರಾತ್ರಿಯ ಆ ಸುಂದರ ಮೌನದ ನಡುವೆ ದೂರದಲ್ಲಿ ಮಿನುಗುವ ನಕ್ಷತ್ರಗಳ ಸೌಂದರ್ಯವನ್ನು ಹತ್ತಿರದಲ್ಲೇ ನೋಡುವಂತೆ ಮಾಡುವ ಮಿಣುಕು ಹುಳುಗಳಿಗೆ ಶುಭರಾತ್ರಿಯೆನ್ನುತ್ತಾ ಚಂದಿರನ ತೋಳತೆಕ್ಕೆಗೆ ಮರಳಿ ನಿದ್ರಾದೇವಿಗೆ ಶರಣಾಗುವುದು.

No comments:

Post a Comment