Wednesday 27 December 2017

ಶೃಂಗೇರಿಯ ಮಡಿಲಲ್ಲೊಂದು ಮುಂಜಾನೆ

ಆಗಸವನ್ನೇ ಭೇದಿಸುವೆನೆಂದು ಹೊರಟು ಮರೆಯಾಗಿತ್ತು ಸಹ್ಯಾದ್ರಿಯ ಶಿಖರ. ಗೆಲುವಿನ ಕಹಳೆಯ ನಾದವ ಹೊರಡಿಸುತ್ತಾ ನಿಂತಿದ್ದವು ಮೋಡಗಳು. ಮೇಘರಾಜನ ಬಾಣಗಳಂತಿದ್ದರೂ ತಂಪನೀಯುತ್ತಿದ್ದವು ಮಳೆ ಹನಿಗಳು. ನಭದ ನೀಲಿಮೆಯನ್ನು ಮುಟ್ಟುವ ಆಸೆಯಿಂದ ಹೊರಟು ನಿಂತಿದ್ದರೂ ವಸುಂಧರೆಯನ್ನು ಬಿಡಲು ಮನಸ್ಸಿಲ್ಲದೆ ಮಣ್ಣಿಗೆ ಅಂಟುಕೊಂಡಿದ್ದವು ತರುಗಳು. ಈ ಮರಗಳ ನಡುವೆಯಿಂದ ತಂಪನೆಯ ಗಾಳಿ ಮೆಲ್ಲಗೆ ನುಸುಳಿ ಬಂದು ಕ್ಷೇಮ ಸಮಾಚಾರ ವಿಚಾರಿಸುತಿತ್ತು. ಇದ್ದೂ ಇಲ್ಲದಂತೆ ಮೌನವಾಗಿ ಹರಿಯುತ್ತಿದ್ದಳು ತುಂಗೆ, ಮನಸ್ಸನ್ನು ಶಾಂತಗೊಳಿಸುತ್ತಾ, ಆತ್ಮವನ್ನು ಶುದ್ಧಗೊಳಿಸುತ್ತಾ. ಕರುವು ತನ್ನ ತಾಯಿಯ ಮೊಲೆಯ ಅಮೃತವನ್ನು ಹೀರುತ್ತಿದ್ದರೆ ಮಳೆಯಿಂದ ಪುಳಕಿತಗೊಂಡ ಕೋಗಿಲೆಯು ಸುಪ್ರಭಾತವ ಹಾಡುತಿತ್ತು. ಇಲ್ಲಿಯೇ ನೆಲೆಸಿದ್ದಳು ಶೃಂಗೇರಿಯ ಶಾರದೆ. ಶಾರದೆಯ ಶೃಂಗಾರದಲ್ಲಿ ಕಿಂಚಿತ್ತು ಕಮ್ಮಿ ಮಾಡಿರಲಿಲ್ಲ ಪ್ರಕೃತಿ ಮಾತೆ. ಹಸಿರಿನ ಹಾಸಿನ ಮೇಲೆ ರಾರಾಜಿಸುತ್ತಾ, ಪರಿಸರದ ಸುಗಂಧದಿ ಸುತ್ತುವರೆದು, ನಾನಾ ಕುಸುಮಗಳಿಂದ ಅಲಂಕೃತಗೊಂಡು, ಹಕ್ಕಿ ಪಕ್ಷಿಗಳ ಸಂಗೀತ ಆಲಿಸುತ್ತಾ, ಅಳಿಲು ಚಿಟ್ಟೆ ಜಿಂಕೆ ನವಿಲುಗಳ ಆಟಗಳನ್ನ ನೋಡುತ್ತಾ ಸಂಭ್ರಮಿಸಿದ್ದಳು ಶಾರದೆ. 
ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡಷ್ಟು ಕಮ್ಮಿ. ನೋಡಿದರೆ ಮನಸ್ಸಿಗೆ ಬರುವ ಪ್ರಶ್ನೆ ಒಂದೇ. ಶೃಂಗೇರಿ ಶಾರದೆಯನ್ನ ಅಲಂಕರಿಸಿದ್ದಳೋ ಅಥವ ಶಾರದೆ ಶೃಂಗೇರಿಯನ್ನ ಅಲಂಕರಿಸಿದ್ದಳೋ ಎಂದು.

Wednesday 20 September 2017

ಅಂಬುಧಿ

ಅಂಬುಧಿಯ ಆಳವನು ಅಳೆಯುತ್ತಾ
ಅದರ ರಹಸ್ಯವನು ಅರಸುತ್ತಾ
ಅನಿಸಿಕೆಗಳ ಅಲೆಗಳಲ್ಲಿ ಮುಳುಗೇಳುತ್ತಾ
ಆಲೋಚನೆಗಳ ಆಸರೆಯಿಂದ ಅಂಚನು ತಲುಪಿ
ಅಂತ್ಯವೆಂದುಕೊಂಡಾಗಲೇ ತಿಳಿದಿದ್ದು ಅದು ಇನ್ನೊಂದರ ಆದಿ ಎಂದು

Saturday 9 September 2017

ಅಂಗಳದ ಕಥೆ ಅದೇ ಹೇಳಿತು...

ಬೆಳಗಿನ ಜಾವದ ಇಬ್ಬನಿಯ ಚಳಿಯಲ್ಲಿ ಭಾಸ್ಕರನ ಎಳೆಯ ಕಿರಣಗಳು ಬೆಚ್ಚಗೆನಿಸುತ್ತದೆ. ಆಗಾಗ ಪಕ್ಷಿಗಳ ಚಿಲಿಪಿಲಿ ಬೆಳಾಗಾಗಿರುವುದನ್ನು ಸಾರುತ್ತಿರುತ್ತದೆ. ಮನೆಯ ಒಡತಿ ಶಾಂತಮ್ಮ ಹಾಡುತ್ತಿದ್ದುದ್ದು ಸುಪ್ರಭಾತವ ಕೇಳುತ್ತಿರುವಂತೆ ಅನ್ನಿಸುತ್ತದೆ. ಬೆಳಗಾಗಿದ್ದರೂ ಇನ್ನು ಮಲಗುವ ಆಸೆ. ಚಂದಿರನ ತೋಳ ತೆಕ್ಕೆಯಲ್ಲಿಯೇ ಇರುವ ಆಸೆ. 
ನೀರಿನ ಹನಿಗಳು ಬಿದ್ದಂತೆಯೇ ನನ್ನ ಕನಸಿನ ಲೋಕದ ಬಾಗಿಲುಗಳು ಮುಚ್ಚಿ ವಾಸ್ತವಿಕತೆಯ ಬಾಗಿಲುಗಳು ತೆರೆದುಕೊಳುತ್ತವೆ. ಬೇಸಿಗೆಯಂತಿಲ್ಲ ಚಳಿಯಂತಿಲ್ಲ, ಪ್ರತೀದಿನ ತಣ್ಣೀರು ಸ್ನಾನವೇ ಗತಿ. ಕಣ್ಣು ಬಿಡುತ್ತಿದ್ದಂತೆಯೇ ಸೂರ್ಯನ ನಗು ಮುಖ. ಆ ಪ್ರಕಾಶ, ಸಕಾರಾತ್ಮಕತೆ ಉತ್ಸಾಹ ಮೂಡಿಸಿತ್ತದೆ. ಹಸಿರು ಸೀರೆ, ಅದರ ಮೇಲೆ ಬಣ್ಣಬಣ್ಣದ ಹೂವುಗಳು. ಅದನ್ನುಟ್ಟು, ರಂಗೋಲಿಯ ಬೊಟ್ಟನಿಟ್ಟು ದಿನವನ್ನು ಆಲಂಗಿಸುತ್ತೇನೆ. ತುಳಸಿಯು ನೆಲೆಸಿ ನನ್ನ ಗೌರವ ಹೆಚ್ಚಿಸಿದ್ದಾಳೆ. ಪ್ರತಿನಿತ್ಯ ಅವಳ ಪೂಜೆ, ಸಂಜೆಯ ದೀಪ, ಇವೆಲ್ಲ ಮನಸ್ಸಿಗೆ ಬಹಳ ಹತ್ತಿರವಾದಂತಹದ್ದು.
ನನಗೆ ನೆಂಟರಿಷ್ಟರು ಸ್ನೇಹಿತರು ಎಂದೆಲ್ಲಾ ಜಾಸ್ತಿ. ಜಾಜಿಯ ರಸ ಹೀರಲು ಜೀರುಂಡೆ ಬಂದ್ರೆ, ತುಂಬೆ ರಸ ಹೀರಕ್ಕೆ ಚಿಟ್ಟೆಗಳು. ಎಷ್ಟು ವಿಧ ಅಂತೀರ. ನನ್ನ ಮೇಲೆ ಕಾಳುಗಳ ಅಭಿಷೇಕ ಆಗುತ್ತಿದ್ದಂತೆಯೇ ಗುಬ್ಬಚ್ಚಿಯ ಚಿಲಿಪಿಲಿ ಕಿವಿಗೆ ಬೀಳುತಿತ್ತು. ವಿಶೇಷ ಅತಿಥಿಗಳು ಎಂದು ಇಲಿಗಳ ಹಿಂದೆ ಬರುವ ನಾಗಪ್ಪ, ವಲಸೆ ಹೋಗುವ ಪಕ್ಷಿಗಳು... ಹೀಗೆ.
ಹಬ್ಬ ಹರಿದಿನಗಳಲ್ಲಿ ಮದುವಣಗಿತ್ತಿಯಂತೆ ಸಿಂಗಾರ ನಂಗೆ. ಗೋಮಯ ಸಾರಿಸಿ, ಲಕ್ಷಣವಾಗಿ ರಂಗೋಲಿ ಹಾಕಿ ಬಣ್ಣ ತುಂಬಿ, ಹೂವಿನ ಅಲಂಕಾರದಿಂದ ಸಿಂಗರಿಸುತ್ತಾರೆ. ಆಚೆ ಈಚೆ ನಿಂತ ಬಾಳೆಗಂಬ ನನಗೆ ಶೋಭಾಯಮಾನ. ಅವರು ಇವರು ಎಂದು ಹತ್ತಿರದ ನೆಂಟರು, ದೂರದ ಸಂಬಂಧಿಕರು ಬರ್ತಾರೆ. ದಿನವಿಡೀ ಮಕ್ಕಳ ಒಂದು ಗುಂಪು ಆಟವಾಡ್ತಿದ್ರೆ, ಒಂದು ಮೂಲೆಯಲ್ಲಿ ಅಜ್ಜರ ಗುಂಪೊಂದು ಹರಟೆ ಹೊಡೆಯುತ್ತಾ ಮಾತಲ್ಲೇ ಪ್ರಪಂಚವನೆಲ್ಲ ಸುತ್ಕೊಂಡು ಬಂದಿರುತ್ತಾರೆ. 
ಹೀಗೆ ದಿನ ಕಳೆಯುವುದೇ ಗೊತ್ತಾಗುವುದಿಲ್ಲ. ಮುಸ್ಸಂಜೆ ಆವರಿಸಿದಂತೆ ನನ್ನ ದಿನದ ಕೆಲಸಗಳಿಗೆ ಬೆಳಕ ನೀಡುವ ಸೂರ್ಯನು ವಿದಾಯ ಹೇಳುತ್ತಾ ಕೆಂಪಡರಿ ಮುಳುಗುತ್ತಾನೆ. ಇನ್ನೇನೆಂದರು ತಮ್ಮ ತಮ್ಮ ಮನೆಗೆ ಹೊರಡುವ ಸ್ನೇಹಿತರಿಗೆ ಮತ್ತೆ ಬನ್ನಿ ಎಂದು ಹೇಳಿಕಳಿಸಿ ಕತ್ತಲನ್ನು ಹೊಕ್ಕುವುದು.  ರಾತ್ರಿಯ ಆ ಸುಂದರ ಮೌನದ ನಡುವೆ ದೂರದಲ್ಲಿ ಮಿನುಗುವ ನಕ್ಷತ್ರಗಳ ಸೌಂದರ್ಯವನ್ನು ಹತ್ತಿರದಲ್ಲೇ ನೋಡುವಂತೆ ಮಾಡುವ ಮಿಣುಕು ಹುಳುಗಳಿಗೆ ಶುಭರಾತ್ರಿಯೆನ್ನುತ್ತಾ ಚಂದಿರನ ತೋಳತೆಕ್ಕೆಗೆ ಮರಳಿ ನಿದ್ರಾದೇವಿಗೆ ಶರಣಾಗುವುದು.

Friday 8 September 2017

ಮರಗಳು

ಮರಗಳು ಹತಾಶೆಯಿಂದ ನುಡಿದವು
"ಇನ್ನು ಕಾಪಾಡಲಾರೆ
ಇನ್ನು ಹೋರಾಡಲಾರೆ"
"ಸೋಲನ್ನು ಒಪ್ಪಿಕೊಳ್ಳುವೆ" ಎಂದು ನೆಲಕ್ಕೆ ಕುಸಿದವು

ತಾಯಿ ಮತ್ತಷ್ಟು ರೋಧಿಸಿದಳು

ಮನುಷ್ಯನ ಮುಖದಲ್ಲಿ ನಗು!

ಗೆಲುವಿನ ಅಟ್ಟಹಾಸವೋ ಮಳೆಯ ಸಂಭ್ರಮವೋ ತಿಳಿಯದು.

Wednesday 7 June 2017

ಅಕ್ಕ

ಬಾಲ್ಯದ ನೆನಪಿನಂಗಳದಿ ಬಣ್ನವ ತುಂಬಿದೆ
ಆಟ ಓಡಾಟಗಳಿಂದ ಖುಷಿಯನ್ನು ಚೆಲ್ಲಿ‍ದೆ
ಪ್ರೀತಿ ಸ್ನೆಹದಂದ ಮನವನ್ನು ಗೆದ್ದೆ
ನನ್ನ ಪ್ರೀತಿಯ ಅಕ್ಕ, ನಾನಿಲ್ಲ ನೀನಿಲ್ಲದೆ

ನಿನ್ನಯ ನೆರಳಿನಲ್ಲಿ ಎನ್ನನು ಭದ್ರ ಪಡಿಸಿದೆ
ಕಾಲಕ್ಕೆ ತಕ್ಕಂತೆ ಜಗತ್ತನ್ನು ಪರಿಚಯಿಸಿದೆ
ನನ್ನಯ ಪಥದಲಿ ಸಾಗಲು ಕಲಿಸಿದೆ
ಎನ್ನಯ ಶಕ್ತಿ, ನಾನಿಲ್ಲ ನೀನಿಲ್ಲದೆ

ತಾಯಿಯ ವಾತ್ಸಲ್ಯವ ತುಂಬಿದೆ
ತಂದೆಯ ಪ್ರತಿಬಿಂಬಿಸುವ ವರವ ನೀಡಿದೆ
ಎಲ್ಲರ ಜೀವದ ಜೀವಳವಾದೆ 
ನಮ್ಮಯ ಉಸಿರೆ, ನಾವಿಲ್ಲ ನೀನಿಲ್ಲದೆ

ಬೆಚ್ಚನೆಯ ಗೂಡಿನ ಬೆಳಕಾದೆ
ಈ ಮನೆಯ ಮಂತ್ರ ನೀನಾದೆ
ಇಲ್ಲಿಯ ಖುಷಿಯ ಆಧಾರವಾದೆ 
ಚೈತನ್ಯವೆ, ಮನೆಯ ಚೆತನವಿಲ್ಲ ನೀನಿಲ್ಲದೆ

ಈ ದಿನದ ಸೌಂದರ್ಯಕ್ಕೆ ಕಾರಣವಾದೆ
ಈ ಹಬ್ಬದ ಸಂಭ್ರಮ ನೀನಾದೆ
ಈ ಸಂಭ್ರಮದಿ ನೀ ನಮಗೆ ವರವಾದೆ
ನಮ್ಮೆಲ್ಲರ ಮನಸು ನಿನಗೆ ಶುಭಕೋರಿದೆ

ಇಂತಿ

ಎಂದಿಗೂ ನಿನ್ನಯ

ದೀ 😘😘

ಬೆಳೆದು

ಅಂಬರದ ಅಪ್ಪುಗೆಯಲ್ಲಿ ನಿದ್ರಿಸಿ ವಸುಂಧರೆಯ ಮಡಿಲಿನಿಂದ ಎದ್ದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ಬಿಸಿಲಲ್ಲಿ ನಕ್ಕು ನಲಿದು ಮಳೆಯಲ್ಲಿ ಕುಣಿದು ಕುಪ್ಪಳಿಸಿ, ತಂಪುಗಾಳಿಯ ಜೊತೆ ಹಾಡುತ್ತಾ, ಗಿಡಮರಗಳ ಜೊತೆ ಅರಳುತ್ತಾ, ಚಿಟ್ಟೆಗಳ ಹಿಂದೆ ಓಡುತ್ತಾ, ಪ್ರಾಣಿಪಕ್ಷಿಗಳ ಸಂಗಡ ಕಲಿಯುತ್ತಾ, ಹಣ್ಣುಹಂಪಲು ಗೆಡ್ಡೆ ಗೆಣಸುಗಳನ್ನು ತಿನುತ್ತಾ... ಬೆಳೆದು... ಬಾಂಧವ್ಯಗಳನ್ನು ಮರೆಯುತ್ತಾ, ಪ್ರಾಣಿಪಕ್ಷಿಗಳನ್ನು ಕೊಲ್ಲುತ್ತಾ, ಮರಗಿಡಳನ್ನು ಕಡಿಯುತ್ತಾ, ಕಲುಷಿತ ಗಾಳಿಯನ್ನು ಸೇವಿಸುತ್ತಾ, ಕೃತಕ ಮಳೆಯಲ್ಲಿ ಕುಣಿದು ಕುಪ್ಪಳಿಸಿ, ಬಿಸಿಲಿಗೆ ಕೊಡೆ ಹಿಡಿದು ದಾಪುಗಾಲು ಹಾಕುತ್ತಾ ಗಗನವ ಛೇದಿಸಿ ಮುನ್ನುಗ್ಗಿ ಮುಂದೇನೆಂದು ಯೋಚಿಸುತ್ತಾ...