ಆತ್ಮವು ದೇಹವ ಹಿಡಿದಿರುವುದೇಕೋ
ಶೂನ್ಯವ ಪೂರ್ಣಗೊಳಿಸಲೋ ತುಂಬಿರುವುದನು ಕಳೆದುಕೊಳ್ಳಲೋ
ಶೂನ್ಯವಾದರೆ ಜಗತ್ತಿಗೆ ಅರ್ಪಿಸುವುದೆಂತೋ
ಕತ್ತಲಲಿ ಬೆಳಕ ಕಾಣುವುದೆಂತೋ
ಬಾಡಿದ ಹೂವನು ಮುಡಿಗೆ ಏರಿಸುವುದೆಂತೋ
ಬರದಲ್ಲಿ ಬೆಳೆ ಬೆಳೆಯುವುದೆಂತೋ
ಕಲಿಯದೆಯೇ ಅರಿಯಲು ಸಾದ್ಯವಗದೇನೋ
ಅಜ್ಞಾನದಲ್ಲಿ ಆಡಂಬರದ್ದೇ ಆಟವೇನೋ
ಹಸಿದ ಹೊಟ್ಟೆಯಲಿ ಹಾತೊರೆಯುವಿಕೆಯೇ ಹೆಚ್ಚೆನೋ
ಇಲ್ಲದಿರುವುದರ ಮೇಲೆ ಆಸೆಯೇ ಅಟ್ಟಹಾಸವಾಡುವುದೇನೋ
ತುಂಬಿಸಿಕೊಳ್ಳುವ ತುಡಿತವೇ ತುದಿಗಾಲಲ್ಲಿರುವುದೇನೋ
ಇನ್ನೂ ಬೇಕು ಎನ್ನುವ ಚಿಂತೆಯು ಮುಗಿಯದೇನೋ
ಕೊರತೆಯಿದ್ದಲ್ಲಿ ಪ್ರೀತಿ ಹುಟ್ಟಲು ಅಸಾಧ್ಯವೇನೋ
ಆತ್ಮವು ದೇಹವ ಇನ್ನೂ ಹಿಡಿದಿರುವುದೇತಕೆ
ಶೂನ್ಯವ ಪೂರ್ಣಗೊಳಿಸಲೋ ತುಂಬಿರುವುದನು ಕಳೆದುಕೊಳ್ಳಲೋ
ತುಂಬಿ ತುಳುಕಾಡುವಂತಿದ್ದರೆ ಅದರ ಭಾರವ ತಡೆಯುವುದೆಂತೋ
ಬೇಸಿಗೆಯ ಬೇಗೆಯಲಿ ತಣಿಸುವುದೆಂತೋ
ಪ್ರವಾಹದಲ್ಲಿ ಪವಡಿಸುವುದೆಂತೋ
ಕಳೆಯೇ ಹೆಚ್ಚಿದ್ದಲ್ಲಿ ಬೆಳೆಯ ಬೆಳೆಯುವುದೆಂತೋ
ಅಹಂಕಾರವ ಬದಿಗಿಟ್ಟು ಅರ್ಹನಾಗುವುದು ಹೇಗೆ
ಸೇವೆಯೆ ಮಾಡದೆ ಆನಂದವ ಅನುಭವಿಸುವುದು ಹೇಗೆ
ಹೊರಗಿನ ಗಲಾಟೆಯಲ್ಲಿ ಅಂತರಂಗದ ಪಿಸುಮಾತು ಕೇಳಿಸುವುದು ಹೇಗೆ
ವಸ್ತುಗಳ ಮೇಲಿನ ವ್ಯಾಮೊಹದ ಮಧ್ಯದಲ್ಲಿ ವಾಸ್ತವ್ಯವನ್ನು ಒಪ್ಪಿಕೊಳ್ಳುವುದು ಹೇಗೆ, ಜೀವನವನು ಪ್ರೀತಿಸುವುದು ಹೇಗೆ
ಸೂರ್ಯನು ಮುಳುಗದಿದ್ದರೆ ಹುಟ್ಟುವುದೆಲ್ಲಿ
ಅಮವಾಸ್ಯೆ ಬರದೇ ಹುಣ್ಣಿಮೆ ಕಾಣುವುದೆಲ್ಲಿ
ಹೂವು ಬಾಡಿ ಗೊಬ್ಬರವಾಗದೇ ಕುಸುಮ ಚಿಗುರುವುದೆಲ್ಲಿ
ಮೋಡ ಮೂಡದೆ ಮಳೆ ಬರುವುದೆಲ್ಲಿ
ಖಾಲಿಯ ಖಿನ್ನತೆಯಿಂದಲೇ ಪೂರ್ಣತ್ವದ ಪ್ರಸಾದವನ್ನು ಕೊಡುವುದು ಸೃಷ್ಟಿಯ ನಿಯಮ
ಖಾಲಿ ಮಾಡುವುದೋ ಅಥವಾ ತುಂಬಿಸುವುದೋ ಅದು ಅಂತರಾತ್ಮದ ಮನನ
ಪರಿಪೂರ್ಣತ್ವದಿಂದ ಅರ್ಪಿಸಿ ಶೂನ್ಯವಾಗುವುದರೆಡೆಗೆ ಆತ್ಮದ ಗಮನ
ನಮನ ನಮನ ನಮನ
-ದೀಪಶ್ರೀ