Thursday, 11 July 2019

ನಿಸರ್ಗದ ನಡುವೆಯಲ್ಲೊಂದು ನಿಶ್ಚಿತಾರ್ಥ



ನಿಸರ್ಗದ ನಡುವೆಯಲ್ಲಾದ ನಮ್ಮ ನಿಶ್ಚಿತಾರ್ಥದ ದಿವಸ
ಎಲ್ಲರ ತುಟಿಯಂಚಿನಲ್ಲಿತ್ತು ಮುಗುಳ್ನಗೆಯ ಮಂದಹಾಸ

ನನಸಾಗಿತ್ತು ಮನೆಯವರ ಕನಸು
ಸಂತಸದಲಿ ಅಂದು ಇಂದು ಅವರ ಮನಸು

ಬೆರಳಿನಲಿತ್ತು ಪ್ರೀತಿಯ ಉಂಗುರ
ಭಗವಂತನ ಆಶೀರ್ವಾದವ ತಲುಪಿಸಿತ್ತು ಅಂಬರ

ಬೆಳಗಿದ್ದವು ಕಂಗಳ ದೀವಿಗೆ
ಬೆಳದಿಂಗಳಾಗಿತ್ತಂದು ಹೊಸ ಬಾಳಿಗೆ

ಮುಖವ ಕೆಂಪೇರಿಸಿತ್ತು ಅವನ ಆ ಕಂಗಳ ಹೊಳಪು
ಲಜ್ಜೆಯಿಂದ ಹೆಚ್ಚಿತ್ತು ನನ್ನ ಅಂದಿನ ಒನಪು

ಭರವಸೆಯ ನೀಡಿತ್ತು ಅವನ ಕೈಯ ಹಿಡಿತ
ನನ್ನವನೆಂದಿತ್ತು ಮನಸ್ಸಿನ ಮಿಡಿತ

ನಿಶ್ಚಿತಾರ್ಥವಾಗಿತ್ತು ಆ ದೈವ ರಚಿತ
ಈ ರಚನೆಯಲ್ಲಿ ನಾನವನಿಗೆ ಬಂಧಿತ ವಂದಿತ

#೧೧-೦೭-೨೦೧೮

Sunday, 21 April 2019

ಕಂಗಳ ಕೊಳದ ತಾವರೆ


ಹೇಗಿರುವೆಯೋ ಎಂತಿರುವೆಯೋ ಎಂದು ಅಂದು
ಹೇಗಿದ್ದರೂ ನನ್ನವನೆಂಬ ಮುದ ಇಂದು

ಗಂಭೀರ ವದನನೋ ನಗು ಚೆಲ್ಲುವೆಯೋ ಎಂದು ಅಂದು
ಗಾಂಭೀರ್ಯವು ಚಂದ ನಗುವು ಇನ್ನಷ್ಟು ಚಂದ ಇಂದು

ಮಾತಾಡುವೆಯೋ ಬರೀ ಮೌನವೋ ಎಂದು ಅಂದು
ಮೌನದಲ್ಲೂ ಮುದ್ದು ಮಾತುಗಳು ಇಂದು

ಆರಂಭದ ಆಡಂಬರವೋ ಅಂತ್ಯದವರೆಗೋ ಎಂದು ಅಂದು
ಆರಂಭ ಅಂತ್ಯಕ್ಕೆ ಸಿಲುಕದ ಅನಂತತೆ ಎಂಬ ಅರಿವು ಇಂದು

ಭಾವನೆಗಳಿಗೆ ಮಿಡಿಯುವೆಯೋ ಸಿಡಿಮಿಡಿ ಎನ್ನುವೆಯೋ ಎಂದು ಅಂದು
ಭಾವನೆಗಳ ಬೆಳದಿಂಗಳಲಿ ನುಡಿ(ಮುತ್ತು)ಗಳು ಇಂದು

ಸುಮ್ಮನೆಯೋ ಸ್ನೇಹಕ್ಕೆ ಈಡಾಗುವುದೋ ಎಂದು ಅಂದು
ಸ್ನೇಹದ ಕಡಲಲ್ಲಿ ಪ್ರೀತಿಯ ಅಲೆಗಳಂತೆ ಇಂದು

ನಿನ್ನ ಕಂಗಳ ಕೊಳದಿ ಬೇರೂರಿದ್ದು ಅಂದು
ಅಲ್ಲಿ ಅರಳಿದ ತಾವರೆ ನಾನಿಂದು


#22ನೇ ಏಪ್ರಿಲ್